ರಾಣ ಪ್ರತಾಪಸಿಂಹ  1572 - 97. ಮೇವಾರದ ಪ್ರಖ್ಯಾತ ರಾಜ. ಸಾಹಸಿ, ವೀರಾಗ್ರಣಿ, ದೇಶಾಭಿಮಾನಿ ಮತ್ತು ಧರ್ಮಾಭಿಮಾನಿ ರಜಪೂತ ದೊರೆ. ಮೊಗಲ್ ಚಕ್ರವರ್ತಿ ಅಕ್ಬರನಿಗೆ ಶರಣಾಗಲು ಒಪ್ಪದೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಈತ ರಾಣ ಉದಯಸಿಂಹನ ಹಿರಿಯ ಮಗ. ಇವನ ತಮ್ಮ ಜಗಮಲ್ಲ ಸಿಂಹಾಸನವೇರಿದಾಗಿ ತನ್ನ ಹಕ್ಕನ್ನು ಪಡೆಯಲು ಅವನೊಡನೆ ಹೋರಾಡಿ ಗೆದ್ದು 1572 ಮಾರ್ಚ್ 1 ರಂದು ಸಿಂಹಾಸನವನ್ನೇರಿದ.

ಈತ ರಾಜನಾದ ಅನಂತರ ರಾಜ್ಯದ ಒಳಡಾಳಿತದ ಬಗೆಗೆ ಹೆಚ್ಚಿನ ಗಮನವನ್ನು ಕೊಟ್ಟ. ಅಕ್ಬರನೊಂದಿಗೆ ಯುದ್ಧ ಮಾಡಲು ಸೈನ್ಯವನ್ನು ಸಜ್ಜುಗೊಳಿಸಲುದ್ಯುಕ್ತನಾದ. ಈ ವೇಳೆಗಾಗಲೇ ರಜಪೂತ ಮನೆತನಗಳೆಲ್ಲ ಮೊಗಲರ ಸಾರ್ವಭೌಮತ್ವವನ್ನು ಒಪ್ಪಿಕೊಂಡಾಗಿತ್ತು. ಮೊಗಲರ ಧಾಳಿ ತಮ್ಮ ರಾಜ್ಯದ ಮೇಲೆ ನಿಶ್ಚಿತವಾದುದೆಂದು ತಿಳಿದ ಈತ 1572 ರಿಂದ 76 ವರೆಗೆ ರಾಜ್ಯದ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಅಪಾರ ಸೈನ್ಯವನ್ನು ಸಜ್ಜುಗೊಳಿಸಿದ. ಅಕ್ಬರ್ ಪ್ರಾರಂಭದಲ್ಲಿ ಸಮೋಪಾಯದಿಂದ ಇವನನ್ನು ಗೆಲ್ಲಲು ತನ್ನ ರಾಯಭಾರಿಗಳನ್ನು ಕಳುಹಿಸುತ್ತಿದ್ದ. ಪ್ರತಾಪಸಿಂಹ ಆ ರಾಯಭಾರಿಗಳನ್ನು ಗೌರವದಿಂದ ಕಂಡು ಸನ್ಮಾನಿಸುತ್ತಿದ್ದನೇ ಹೊರತು ಅಕ್ಬರನಿಗೆ ಶರಣಾಗತನಾಗಲು ಒಪ್ಪಲಿಲ್ಲ. ಅಕ್ಬರ್ 1576 ಜೂನ್ 21 ರಂದು ಮಾನಸಿಂಹನ ನೇತೃತ್ವದಲ್ಲಿ ಮೇವಾರದ ಮೇಲೆ ಸೈನ್ಯವನ್ನು ಕಳುಹಿಸಿದ. ಮೊಗಲ್ ಸೈನ್ಯ ಹಳದಿಘಾಟ್ ಎಂಬಲ್ಲಿ ಬೀಡುಬಿಟ್ಟಿತು. ಪ್ರತಾಪಸಿಂಹ ತನ್ನ ಸೈನ್ಯದೊಂದಿಗೆ ಮೊಗಲರ ಸೇನೆಯ ಮೇಲೆ ದಾಳಿ ಮಾಡಿದ. ಇದರಿಂದ ಮೊಗಲ್ ಸೈನ್ಯದ ದಿಗ್ಭ್ರಮೆಗೊಂಡಿತು. ದಿಕ್ಕೆಟ್ಟ ಸೇನೆಯನ್ನು ಮಾನಸಿಂಹ ಹುರಿದುಂಬಿಸಿ ಯುದ್ಧಕ್ಕೆ ಸಜ್ಜುಗೊಳಿಸುತ್ತಿರುವಾಗಲೇ ಪ್ರತಾಪಸಿಂಹ ಅವನನ್ನು ನೇರವಾಗಿ ಎದುರಿಸಿದ. ಆನೆಯ ಮೇಲೆ ಕುಳಿತ ಮಾನಸಿಂಹನೊಡನೆ ಪ್ರತಾಪಸಿಂಹನ ಕೈ ಹಿಂದಾದುದನ್ನು ತಿಳಿದ ಅವನ ಪ್ರೀತಿಯ ಕುದುರೆ ತನ್ನ ಒಡೆಯನನ್ನು ಯುದ್ಧ ರಂಗದಿಂದ ಬಹುದೂರ ಕರೆದುಕೊಂಡು ಹೋಗಿ ಪ್ರಾಣಾಪಾಯದಿಂದ ಪಾರುಮಾಡಿ ಕೊನೆಯುಸಿರೆಳೆಯಿತು.

ಹಳದಿಘಾಟ್ ಯುದ್ಧದಲ್ಲಿ ಪ್ರತಾಪಸಿಂಹನ ಸೈನಿಕರು ಅಪಾರ ಧೈರ್ಯೋತ್ಸಾಹಗಳಿಂದ ಹೋರಾಡಿದರು. ಈ ಸಂದರ್ಭದಲ್ಲಿ ಆಫ್‍ಘನ್ ದಳಪತಿ ಹಕೀಮ್ ನೂರ್ ಪಠಾನ್ ತೋರಿದ ಉಲ್ಲೇಖನಾರ್ಹ. ಭಿಲ್ಲರು ಪ್ರತಾಪಸಿಂಹನ ಸೈನ್ಯದಲ್ಲಿ ಅಸಾಮಾನ್ಯ ಶೌರ್ಯವನ್ನು ಪ್ರದರ್ಶಿಸಿದರೂ ನಾಯಕನಿಲ್ಲದಿದ್ದರಿಂದ ಸೋಲನ್ನೊಪ್ಪಿಕೊಂಡರು. ಮರುದಿನ ಮಾನಸಿಂಹ ಪ್ರತಾಪಸಿಂಹ ತಾತ್ಕಾಲಿಕ ರಾಜಧಾನಿ ಗೋಗುಂಡವನ್ನು ವಶಪಡಿಸಿಕೊಂಡ.

ಅಕ್ಬರನು ಕುತ್ಬುದ್ದೀನ್ ಖಾನ್ ಮತ್ತು ರಾಜಾ ಭಗವಾನ್ ದಾಸರನ್ನು ಒಂದು ಸೈನ್ಯದ ತುಕಡಿಯೊಂದಿಗೆ ಮತ್ತೊಂದು ತುಕಡಿಯನ್ನು ಶಾಭಾಸ್‍ಖಾನನ ನೇತೃತ್ವದಲ್ಲಿ ಪ್ರತಾಪಸಿಂಹನನ್ನು ಹಿಡಿದುತರಲು ಕಳುಹಿಸಿದ. ವರ್ಷಗಳುರುಳಿದರೂ ಪ್ರತಾಪಸಿಂಹನ ಸುಳಿವು ಸಿಗಲಿಲ್ಲ. ಅವನೆಲ್ಲೊ ಸತ್ತಿರಬಹುದೆಂದು ತಿಳಿದ ಮೊಗಲ್ ದಳಪತಿಗಳು ತಮ್ಮ ಸೈನ್ಯದೊಂದಿಗೆ ರಾಜಧಾನಿಗೆ ಹಿಂದಿರುಗಿದರು. 1585 ರ ಹೊತ್ತಿಗೆ ಮತ್ತೆ ಪ್ರತಾಪಸಿಂಹ ಮೇವಾರವನ್ನು ವಶಪಡಿಸಿಕೊಂಡ. ರಾಜ ಜಗನ್ನಾಥನನ್ನು ಅಕ್ಬರ್ ಪ್ರತಾಪಸಿಂಹನ ವಿರುದ್ಧವಾಗಿ ಕಳುಹಿಸಿದರೂ ಅದು ಫಲಪ್ರದವಾಗಲಿಲ್ಲ.

ಪ್ರತಾಪಸಿಂಹ ಮೇವಾರವನ್ನು ವಶಪಡಿಸಿಕೊಂಡು ರಾಜ್ಯವನ್ನು ಬಲಪಡಿಸಲು ಸಾಕಷ್ಟು ಶ್ರಮಿಸಿದ. ಒಮ್ಮೆ ಈತ ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಅಕಸ್ಮಾತ್ ಬಾಣವೊಂದು ತಗುಲಿ 1597ಜನವರಿ 19 ರಂದು ದುರ್ಮರಣಕ್ಕೀಡಾದ.
			                       (ಎಂ.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ